ಟಾಲಮೀ ದೊರೆಗಳು -
ಕ್ರಿ.ಪೂ. 232 ರಿಂದ ಕ್ರಿ..ಪೂ. 30ರ ವರೆಗೆ ಈಜಿಪ್ಟನ್ನು ಆಳಿದ ಮ್ಯಾಸಿಡೋನಿಯನ್ ದೊರೆಗಳು.

ಟಾಲಮೀ I : ಈ ಸಂತತಿಯ ಸ್ಥಾಪಕ. ಲಾಗಸನ ಪುತ್ರ. ಅಲೆಕ್ಸಾಂಡರ್ ಮಹಾಶಯನ ನಿಷ್ಠೆಯ ದಂಡನಾಯಕ, ಅವನ ಏಳು ಜನ ಪ್ರಮುಖ ಅಂಗರಕ್ಷಕರಲ್ಲೊಬ್ಬ. ಅಲೆಕ್ಸಾಂಡರನ ಭಾರತ ಮತ್ತು ಆಫ್ಘಾನಿಸ್ತಾನಗಳ ದಾಳಿಗಳಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ. ಸೂಸದಲ್ಲಿ ನಡೆದ ಮದುವೆ ಸಮಾರಂಭದಲ್ಲಿ (ಕ್ರಿ.ಪೂ.324) ಅಲೆಕ್ಸಾಂಡರನ ಒತ್ತಾಯಕ್ಕೆ ಕಟ್ಟುಬಿದ್ದು ಪರ್ಷಿಯದ ರಾಜಕುಮಾರಿ ಆರ್ತಕಾಮಳನ್ನು ವಿವಾಹವಾದ.

ಕ್ರಿ..ಪೂ.323ರಲ್ಲಿ ಅಲೆಕ್ಸಾಂಡರ್ ಮಡಿದಾಗ ಬ್ಯಾಬಿಲಾನಿನ ಸಾಮ್ರಾಜ್ಯದ ಮರು ಸ್ಥಾಪನೆಗೆ ಒಂದನೆಯ ಟಾಲಮೀ ಬಹುವಾಗಿ ಶ್ರಮಿಸಿದ. ಅನಂತರ ಹೆಸರಿಗೆ ಮಾತ್ರ ರಾಜನಾಗಿದ್ದ ಫಿಲಿಪ್ ಮತ್ತು ಯುವಕ ಅಲೆಕ್ಸಾಂಡರನ ಕಾಲದಲ್ಲಿ ಈತ ಈಜಿಪ್ಟಿನ ಸತ್ರಪ ಆಗಿ ನೇಮಿತನಾದ. ಅಧಿಕಾರ ವಹಿಸಿಕೊಂಡ ಕೂಡಲೆ ಅಲೆಕ್ಸಾಂಡರನಿಂದ ಈಜಿಪ್ಟಿನಲ್ಲಿ ಹಣಕಾಸಿನ ನಿಯಂತ್ರಣಾಧಿಕಾರಿಯಾಗಿ ನೇಮಿಸಲ್ಪಟ್ಟಿದ್ದ ಕ್ಲಿಯಾಮಿನೀಸûನನ್ನು ಕೊಲ್ಲಿಸಿ ಪ್ರಾಂತ್ಯದಲ್ಲಿ ಪ್ರಾಮುಖ್ಯಕ್ಕೆ ಬಂದ. ಸಂಚು ಹೂಡಿ ಅಲೆಕ್ಸಾಂಡರನ ಶವವನ್ನು ಪಡೆದು ಅದನ್ನು ತಾತ್ಕಾಲಿಕವಾಗಿ ಮೆಂಫಿಸ್‍ನಲ್ಲಿರಿಸಿದ್ದ. ಇದರಿಂದ ಟಾಲಮಿಗೂ ಸಾಮ್ರಾಜ್ಯದ ರೀಜೆಂಟನಾದ ಪರ್ಡಿ ಕ್ಯಾಸನಿಗೂ ಕಲಹವುಂಟಾಯಿತು. ಪರ್ಡಿಕ್ಯಾಸ್ ಕ್ರಿ .ಪೂ. 321ರಲ್ಲಿ ಈಜಿಪ್ಟಿನ ಮೇಲೆ ದಾಳಿಮಾಡಿದಾಗ ಯುದ್ಧದಲ್ಲಿ ಮರಣವನ್ನಪ್ಪಿದ.

ಮ್ಯಾಸಿಡೋನಿಯನ್ ದೊರೆಗಳೊಡನೆ ಆರಂಭವಾದ ದೀರ್ಘಕಾಲದ ಯುದ್ಧಗಳ ಕಾಲದಲ್ಲಿ ಈಜಿಪ್ಟನಲ್ಲಿ ತನ್ನ ಸ್ಥಾನವನ್ನು ಭದ್ರಗೊಳಿಸಿಕೊಳ್ಳುವುದು ಟಾಲಮಿಯ ಪ್ರಥಮ ಉದ್ದೇಶವಾಗಿತ್ತು. ಸಿರನೇಕ, ಸೈಪ್ರಸ್ ಮತ್ತು ಪ್ಯಾಲಸ್ಟೈನ್‍ಗಳನ್ನು ವಶಪಡಿಸಿಕೊಳ್ಳವುದು ಅವನ ಎರಡನೆಯ ಉದ್ದೇಶ. ಕ್ರಿ.ಪೂ. 318ರಲ್ಲಿ ಪ್ಯಾಲಸ್ಟೈನನ್ನು ಪ್ರಥಮ ಬಾರಿ ವಶಪಡಿಸಿಕೊಂಡ. ಅನಂತರ ಸೈಪ್ರಸಿನ ಸಣ್ಣ ರಾಜರುಗಳ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿದ. ಆಂಟಿಗೋನಸ್‍ನ ಪ್ರಾಬಲ್ಯದಿಂದಾಗಿ ಪ್ಯಾಲಸ್ಟೈನನ್ನು ಮೂರು ಸಲ ತೆರವು ಮಾಡಿದ. ಕ್ರಿ .ಪೂ. 305ರಲ್ಲಿ ರಾಜನೆಂಬ ಅಭಿಧಾನ ಪಡೆದು ಈಜಿಪ್ಟನ್ನು ಆಳತೊಡಗಿದ, ಧೈರ್ಯದಿಂದ ಯುದ್ಧ ಮಾಡಿ ಆಂಟಿಗೋನಸನನ್ನು ಸೋಲಿಸಿದ (ಕ್ರಿ .ಪೂ. 306-5). ಡೆಮೆಟ್ರಿಯಸನ ದಾಳಿಗೆ ಒಳಗಾದ ರೋಡಿಯನ್ನರಿಗೆ ಸಹಾಯ ಮಾಡಿದುದರಿಂದ ಸೋಟರ್ (ರಕ್ಷಕ) ಎಂಬ ಬಿರುದು ಪಡೆದ. ಆಂಟಿಗೋನಸನ ಮರಣದ ಅನಂತರ ನಾಲ್ಕನೆಯ ಬಾರಿಗೆ ಪ್ಯಾಲಸ್ಟೈನನ್ನು ವಶಪಡಿಸಿಕೊಂಡ. ಸಂಯುಕ್ತ ಪಕ್ಷದ ಇತರ ಸದಸ್ಯರು ಪ್ಯಾಲಸ್ಟೈನನ್ನು ಸೆಲ್ಯೂಕಸನಿಗೆ ಕೊಟ್ಟಿದ್ದರು. ಇದರಿಂದ ಪ್ಯಾಲಸ್ಟೈನ್ ಯಾರಿಗೆ ಸೇರಬೇಕೆಂಬ ವಿಷಯದಲ್ಲಿ ಮುಂದಿನ ನೂರು ವರ್ಷಗಳ ಕಾಲ ಸೆಲ್ಯೂಕಸನ ಸಂತತಿಯವರಿಗೂ ಟಾಲಮಿಯ ಸಂತತಿಯವರಿಗೂ ಕಲಹಗಳುಂಟಾದುವು.

ಟಾಲಮೀ ಗ್ರೀಕ್ ಹಾಗೂ ಮ್ಯಾಸಿಡೋನಿಯನರಿಬ್ಬರನ್ನೂ ತನ್ನ ಸೈನ್ಯಕ್ಕೆ ಸೇರಿಸಿಕೊಂಡ. ಆದರೆ ಸ್ಥಳೀಯ ಜನರನ್ನು ಕಡೆಗಾಣಿಸಲಿಲ್ಲ. ಸಾಹಿತ್ಯಕ್ಕೆ ಉತ್ತೇಜನ ನೀಡಿದ. ಅಲೆಕ್ಸಾಂಡರನ ದಂಡೆಯಾತ್ರೆಗಳನ್ನು ಕುರಿತು ಸ್ವತಃ ಬರೆದ. ಅಲೆಕ್ಸಾಂಡ್ರಿಯದ ಪ್ರಸಿದ್ಧ ಗ್ರಂಥಾಲಯದ ಪ್ರಾರಂಭಕ್ಕೆ ಈತನೇ ಕಾರಣ.

ಕ್ರಿ.ಪೂ. 285ರಲ್ಲಿ ಟಾಲಮೀ ತನ್ನ ಕಿರಿಯ ಪುತ್ರನಿಗಾಗಿ ಸಿಂಹಾಸನ ತ್ಯಜಿಸಿದ. ಅವನೂ ತಂದೆಯ ಹೆಸರಿನಿಂದಲೇ ಸಿಂಹಾಸನವೇರಿದ್ದರಿಂದ ಎರಡನೆಯ ಟಾಲಮೀ ಎನಿಸಿಕೊಂಡ.

ಟಾಲಮೀ II (ಫಿಲಡೆಲ್ಫಸ್): ಆಳ್ವಿಕೆ ಕ್ರಿ.ಪೂ. 309-246. ಈತ ಹಿಂದಿನ ಮ್ಯಾಸಿಡೋನಿಯನ್ ದಂಡನಾಯಕರಂತೆ ದೃಢಶರೀರದವನಲ್ಲ. ಆದರೂ ಅಲೆಕ್ಸಾಂಡ್ರಿಯದಲ್ಲಿ ವೈಭವಯುತವಾದ ರಾಜಸ್ಥಾನ ನಡೆಸಿಕೊಂಡು ಬಂದ. ಸೆಲ್ಯೂಕಸನ ಮಗ ಒಂದನೆಯ ಆಂಟಿಯೋಕಸ್ ಪ್ಯಾಲಸ್ಟೈನ್ ಪಡೆಯಲು ಈತನ ಮೇಲೆ ಯುದ್ಧವನ್ನಾರಂಭಿಸಿದ. ಬಹು ಬೇಗ ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿ ಈಜಿಪ್ಟ್ ಪ್ರಬಲ ನೌಕಾದಳ ಪಡೆದ ರಾಷ್ಟ್ರವಾಯಿತು. ಟಾಲಮಿಯ ಪ್ರಭಾವ ಹಲವು ಪ್ರದೇಶಗಳಲ್ಲಿ ಹರಡಿತು.

ಮ್ಯಾಸಿಡೋನಿಯನ್ ರಾಜ ಆಂಟಿಗೋನಸ್ ಈತನನ್ನು ಸೋಲಿಸಿದ. ಈ ಸೋಲು ಈಜಿಯನ್ ಸಮುದ್ರದ ಮೇಲೆ ಟಾಲಮೀ ಹೊಂದಿದ್ದ ಪ್ರಭಾವವನ್ನೇನೂ ಕಡಿಮೆಗೊಳಿಸಲಿಲ್ಲ. ಸೆಲ್ಯೂಸಿಡ್ ರಾಜ್ಯದೊಡನೆ ನಡೆದ ಎರಡನೆಯ ಯುದ್ಧದಲ್ಲಿ ಟಾಲಮೀ ಸೋಲನ್ನನುಭವಿಸಿ ಅಲ್ಲಿಯ ರಾಜ ಎರಡನೆಯ ಆಂಟಿಯೋಕಸನಿಗೆ ತನ್ನ ಪುತ್ರಿಯನ್ನು ವಿವಾಹ ಮಾಡಿಕೊಟ್ಟು ಒಪ್ಪಂದ ಮಾಡಿಕೊಳ್ಳಬೇಕಾಯಿತು. ಅಲೆಕ್ಸಾಂಡ್ರಿಯದಲ್ಲಿಯ ರಾಜಾಸ್ಥಾನದ ವೈಭವ ಎರಡನೆಯ ಟಾಲಮೀಯ ಕಾಲದಲ್ಲಿ ಬಹಳ ಪ್ರಸಿದ್ಧವಾಗಿತ್ತು. ಈತನ ಕಾಲದಲ್ಲಿ ಸಾಹಿತ್ಯಕ್ಕೆ ತುಂಬ ಉತ್ತೇಜನ ದೊರಕಿತು. ಈತನ ಕಾಲದಲ್ಲಿಯೇ ಪ್ರಸಿದ್ಧ ಗ್ರೀಕ್ ವಿದ್ವಾಂಸ ಕಲಿಮಕಸ್ ಅಲೆಕ್ಸಾಂಡ್ರಿಯ ಗ್ರಂಥಾಲಯದ ಗ್ರಂಥಪಾಲನಾದದ್ದು. ಥಿಯಾಕ್ರಿಟಸ್ ಮತ್ತಿತರ ಕವಿಗಳು ಟಾಲಮೀ ಸಂತತಿಯವರನ್ನು ಕೊಂಡಾಡಿದರು. ಸ್ವತಃ ಟಾಲಮೀ ಗ್ರಂಥಭಂಡಾರವನ್ನು ಬೆಳೆಸಿ ವೈಜ್ಞಾನಿಕ ಸಂಶೋಧನೆಗಳು ನಡೆಯಲು ಅವಕಾಶ ಮಾಡಿಕೊಟ್ಟ. ವಿವಿಧ ಪ್ರದೇಶಗಳಿಂದ ಪ್ರಾಣಿಗಳನ್ನು ತರಿಸಿ ಅಲೆಕ್ಸಾಂಡ್ರಿಯದಲ್ಲೀರಿಸಿದ್ದ. ಆದರೆ ಸ್ಥಳೀಯ ಧರ್ಮದಲ್ಲಿ ಆಸಕ್ತಿ ತೋರಲಿಲ್ಲ. ಈತ ಹಳೆಯ ಒಡಂಬಡಿಕೆಯನ್ನು ಗ್ರೀಕ್ ಭಾಷೆಗೆ ಅನುವಾದಿಸಿದ.

ಟಾಲಮೀ III (ಅಯೂರ್ ಜೆಟೀಜ್ 1): ಆಳ್ವಿಕೆ ಕ್ರಿ..ಪೂ.246-221. ಎರಡನೆಯ ಟಾಲಮೀಯ ಪುತ್ರ. ಇವನು ಮ್ಯಾಗಾಸನ ಪುತ್ರಿ ಬೆರಿನರೀಳನ್ನು ಮದುವೆಯಾಗಿ ಅವಳಿಗೆ ಸೇರಿದ ಸಿರೆನೇಕವನ್ನು ಈಜಿಪ್ಟಿನಲ್ಲಿ ಸೇರಿಸಿದ. ಇದೇ ವೇಳೆಯಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ರಾಜ ಎರಡನೆಯ ಆಂಟಿಯೋಕಸ್ ತೀರಿಕೊಂಡ. ಈ ಅವಕಾಶವನ್ನುಪಯೋಗಿಸಿಕೊಂಡು ಅದರ ಮೇಲೆ ದಾಳಿಮಾಡಿ ಬ್ಯಾಬಿಲೋನಿಯದವರೆಗೂ ನುಗ್ಗಿದ, ಇರಾನಿನ ಸಣ್ಣಪುಟ್ಟ ಸಂಸ್ಥಾನಗಳ ಶರಣಾಗತಿಯನ್ನು ಒಪ್ಪಿಕೊಂಡ. ಈತನ ನೌಕಾಪಡೆ ಈಜಿಯನ್ ಸಮುದ್ರ ಪ್ರದೇಶದಲ್ಲಿ ಈತನ ತಂದೆ ಕಳೆದುಕೊಂಡಿದ್ದ ಪ್ರದೇಶಗಳನ್ನು ಮತ್ತೆ ಪಡೆದು ತನ್ನ ಹಿಂದಿನ ಪ್ರಾಬಲ್ಯವನ್ನು ಗಳಿಸಿತು. ಅನಂತರದ ಕಾಲದಲ್ಲಿ ಟಾಲಮೀ ಹೆಚ್ಚಾಗಿ ಯುದ್ಧಗಳಲ್ಲಿ ಭಾಗವಹಿಸಲಿಲ್ಲ.

ಟಾಲಮೀ Iಗಿ (ಫಿಲಾಪಟಾರ್) : ಆಳ್ವಿಕೆ ಕ್ರಿ.ಪೂ. 221-204. ಮೂರನೆಯ ಟಾಲಮೀಯ ಮಗ. ವ್ಯಭಿಚಾರಿಯಾದ ಈತನ ಕಾಲದಲ್ಲಿ ಸಾಮ್ರಾಜ್ಯದ ಅವನತಿ ಪ್ರಾರಂಭವಾಯಿತು. ಈತ ತುಂಬ ಅಶಕ್ತ ರಾಜ. ಯಾವಾಗಲೂ ಸ್ನೇಹಿತರ ಪ್ರಭಾವಕ್ಕೆ ಒಳಗಾಗಿದ್ದ. ದೇಶವನ್ನು ಯುದ್ಧದಲ್ಲಿ ತೊಡಗಿಸಿದ. ಇದರಿಂದಾಗಿ ಮುಂದಿನ ಮೂವತ್ತು ವರ್ಷಗಳ ಕಾಲ ಒಂದೇ ಸಮನೆ ದಂಗೆಗಳಿಗೆಡೆಯಾಯಿತು. ಸಾಹಿತಿಯಾಗಿದ್ದ ಈತ ಒಂದು ಗಂಭೀರನಾಟಕವನ್ನು ಬರೆದಿದ್ದಾನೆ. ಇವನು ಹೋಮರನಿಗೆ ಒಂದು ದೇವಸ್ಥಾನ ಕಟ್ಟಸಿದ.

ಟಾಲಮೀ ಗಿ (ಎಪಿಫನೀಸ್) : ಆಳ್ವಿಕೆ ಕ್ರಿ.ಪೂ. 204-181. ನಾಲ್ಕನೆಯ ಟಾಲಮೀಯ ಮಗ. ತುಂಬ ಚಿಕ್ಕ ವಯಸ್ಸಿನಲ್ಲಿಯೇ ಸಿಂಹಾಸನವೇರಿದ. ಈತನ ಪರವಾಗಿ ಆಡಳಿತ ನಡೆಸಿದ ರಾಜಪ್ರತಿನಿಧಿಗಳ ದೇಶದ ಸ್ಥಿತಿಯನ್ನು ಹದಗೆಡಿಸಿದರು. ಮೂರನೆಯ ಆಂಟಿಯೋಕಸ್ ಮತ್ತು ಮ್ಯಾಸಿಡೋನಿಯದ ಐದನೆಯ ಫಿಲಿಪ್ ಇವರು ಟಾಲಮೀಯ ಹೊರದೇಶದ ಸ್ವತ್ತುಗಳನ್ನು ತಮ್ಮಲ್ಲಿ ಹಂಚಿಕೊಳ್ಳುವ ಒಂದು ಒಪ್ಪಂದ ಮಾಡಿಕೊಂಡರು. ಕ್ಯಾರೀಯ ಮತ್ತು ತ್ರೇಸ್‍ನಲ್ಲಿ ಅನೇಕ ಪ್ರದೇಶಗಳನ್ನು ಫಿಲಿಪ್ ವಶಪಡಿಸಿಕೊಂಡ. ಪಾಲಸ್ಟೈನ್ ಸೆಲ್ಯೂಸಿಡರಿಗೆ ಹೋಯಿತು. ಕೊನೆಗೆ ಆಂಟಿಯೋಕಸ್ ಟಾಲಮೀಗೆ ತನ್ನ ಪುತ್ರಿ ಕ್ಲೀಯೊ ಪಾತ್ರಳನ್ನು ವಿವಾಹ ಮಾಡಿಕೊಟ್ಟು ಶಾಂತಿ ಒಪ್ಪಂದ ಮಾಡಿಕೊಂಡ. ಆದರೂ ಆಂಟಿಯೊಕಸ್ ರೋಮಿನೊಡನೆ ಯುದ್ಧಕ್ಕಿಳಿದಾಗ ಟಾಲಮೀ ರೋಮಿನವರ ಪಕ್ಷ ವಹಿಸಿದ. ಟಾಲಮೀ ಒಳ್ಳೆಯ ಕ್ರೀಡಾಪಟುವಾಗಿದ್ದು ಅನೇಕ ಪಂದ್ಯಗಳಲ್ಲಿ ಪ್ರಾವೀಣ್ಯ ಗಳಿಸಿದ್ದ. ಈತ ಈಜಿಪ್ಟಿನ ದುಃಸ್ಥಿತಿಯನ್ನು ಹೋಗಲಾಡಿಸಲು ಅನೇಕ ಸುಧಾರಣೆಗಳನ್ನು ಜಾರಿಗೆ ತಂದಂತೆ ತೋರುತ್ತದೆ. ಈ ವಿಷಯ ಜಗತ್ ಪ್ರಸಿದ್ಧ ರೋಸೆಟ್ಟ ಶಾಸನಫಲಕದಲ್ಲಿ ನಿರೂಪಿತವಾಗಿದೆ. ಆದರೆ ಈತನ ಪ್ರಯತ್ನಗಳು ಸಫಲವಾದಂತೆ ತೋರುವುದಿಲ್ಲ.
ಟಾಲಮೀ ಗಿI (ಫಿಲಾಮೀಟಾರ್) : ಆಳ್ವಿಕೆ ಕ್ರಿ.ಪೂ. 181-145. ಐದನೆಯ ಟಾಲಮೀಯ ಹಿರಿಯ ಮಗ. ಚಿಕ್ಕವಯಸ್ಸಿನಲ್ಲಿಯೇ ರಾಜನಾದ. ಸ್ವಂತ ಸಹೋದರಿ 2ನೆಯ ಕ್ಲೀಯೊಪಾತ್ರಳನ್ನು ಮದುವೆಯಾದ. ತಾಯಿ ಕ್ಲೀಯೊಪಾತ್ರಳೇ ರಾಜಪ್ರತಿನಿಧಿಯಾಗಿ ಆಳ್ವಿಕೆ ಪ್ರಾರಂಭಿಸಿದಳು. ಅವಳ ಮರಣದ ಅನಂತರ ಟಾಲಮೀ ಮತ್ತು ಸೆಲ್ಯೂಸಿಡ್ ಸಂತತಿಯವರ ನಡುವೆ ವೈಮನಸ್ಯ ಆರಂಭವಾಯಿತು. ತನ್ನ ತಮ್ಮ ಅಯೂರ್‍ಜೆವೇeóï ಸಿರಿನಿಕಾಕ್ಕೆ ರಾಜನಾಗಲು ಈತ ಸಹಾಯ ಮಾಡಿದ. ಸೆಲ್ಯೂಸಿಡ್ ರಾಜ ಡೆಮೆಟ್ರಿಯಸನ ವಿರುದ್ಧ ಸಂಯುಕ್ತ ಪಕ್ಷವನ್ನು ಸೇರಿ ಅವನ ನಾಶಕ್ಕೆ ಟಾಲಮೀ ಕಾರಣನಾದ. ಸೆಲ್ಯೂಸಿಡ್ ದೊರೆ ನಾಲ್ಕನೆಯ ಆಂಟಿಯೋಕಸ್ ಪ್ಯಾಲಸ್ಟೈನನ್ನು ಪಡೆಯಲು ಟಾಲಮೀಯೊಂದಿಗೆ ಯುದ್ಧಮಾಡಿ ಅವನನ್ನು ಸೋಲಿಸಿ ಬಂಧಿಸಿದ. ಆದರೆ ರೋಮ್ ಸಾಮ್ರಾಜ್ಯದ ಮಧ್ಯಸ್ಥಿಕೆಯಿಂದ ತನ್ನ ಸೋದರ ಅಯೂರ್‍ಜೆವೇeóïನೊಡನೆ (ಟಾಲಮೀ ಗಿIII) ಜಂಟಿ ರಾಜನಾಗಿ ಮತ್ತೆ ಸಿಂಹಾಸನವೇರಿದ. ಆದರೆ ಬಹುಬೇಗ ಸಹೋದರರಲ್ಲಿ ಕಲಹ ಪ್ರಾರಂಭವಾಯಿತು. ರೋಮ್ ಮಧ್ಯಸ್ಥಿಕೆ ವಹಿಸಿ ಅಯೂರ್‍ಜೆವೇeóïನಿಗೆ ಸಿರಿನೀಕವನ್ನು ಪ್ರತ್ಯೇಕ ರಾಜ್ಯವಾಗಿ ಒಪ್ಪಿಸಿತು. ಆದರೂ ಸಹೋದರರ ಮಧ್ಯೆ ಆಗಾಗ ಕದನಗಳು ಆಗುತ್ತಲೇ ಇದ್ದವು. ಕ್ರಿ.ಪೂ. 145ರಲ್ಲಿ ಆಂಟಿಯೋಕಸ್ ಸಮೀಪದಲ್ಲಿ ಅಲೆಕ್ಸಾಂಡರ್ ಬಲಾಸನೊಡನೆ ಯುದ್ಧ ಮಾಡುತ್ತಿದ್ದಾಗ ಗಾಯಗೊಂಡು ಮರಣಹೊಂದಿದ.

ಫಿಲಾಮೀಟಾರ್ ಟಾಲಮೀ ಈ ವಂಶದಲ್ಲೇ ಅತ್ಯುತ್ತಮ ರಾಜನೆಂದು ಹೇಳಬಹುದು. ಬಹುಪಾಲು ಯುದ್ಧಗಳಲ್ಲಿ ಈತ ಸ್ವತಃ ಭಾಗವಹಿಸುತ್ತಿದ್ದ. ಈತನ ಮರಣಾನಂತರ ಇವನ ಶಿಶುಕುವರನನ್ನು (ಟಾಲಮೀ ಗಿII) ಸಿಂಹಾಸನಕ್ಕೆ ತರಲಾಯಿತು. ಆದರೆ ಅಯೂರ್‍ಜೆವೇeóï ಅವನನ್ನು ಕೊಂದು ಪಟ್ಟಕ್ಕೆ ಬಂದ.

ಟಾಲಮೀ ಗಿIII (ಅಯೂರ್ ಜೆವೇeóï 2): ಆಳ್ವಿಕೆ ಕ್ರಿ.ಪೂ. 144-116. ಪಟ್ಟವೇರಿದ ಕೊಡಲೆ ತನ್ನ ಸೋದರಿಯೂ ಅಣ್ಣನ ವಿಧವೆಯೂ ಆದ 2ನೆಯ ಕ್ಲೀಯೊಪಾತ್ರಳನ್ನು ಮದುವೆಯಾದ. ಅನಂತರ ಸೋದರಿಯ ಮಗಳು 3ನೆಯ ಕ್ಲೀಯೊಪಾತ್ರಳನ್ನು ಮದುವೆಯಾದ. ಈ ಮದುವೆಯಿಂದಾಗಿ ಎರಡನೇ ಕ್ಲಿಯೋಪಾತ್ರ ದಂಗೆಯೆದ್ದು ಅಯೂರ್ ಜೆವೇಜûನನ್ನು ಈಜಿಪ್ಟಿನಿಂದ ಓಡಿಸಿದಳು. ಕ್ರಿ.ಪೂ. 131-129ರ ಅವಧಿಯಲ್ಲಿ ಈತ ಸೈಪ್ರಸ್‍ನಲ್ಲಿ ಆಳಿದ, ಅನಂತರ ಈಜಿಪ್ಟಿಗೆ ಹಿಂದಿರುಗಿ ಮತ್ತೆ ಸಿಂಹಾಸನವೇರಿದ. ತುಂಬ ಕ್ರೂರಿಯಾಗಿದ್ದ ಈತ ರಕ್ತಪಾತಕ್ಕೆ ಎಂದೂ ಹೇಸಲಿಲ್ಲ. ಗ್ರೀಕರು ಈತನನ್ನು ಅಷ್ಟಾಗಿ ಮನ್ನಿಸಿದಂತೆ ತೋರುವುದಿಲ್ಲ. ಆದರೆ ದೇಶೀಯ ಜನರ ಬೆಂಬಲ ಈತನಿಗಿತ್ತು. ಈತ ಗ್ರೀಕ್ ಸಂಸ್ಕøತಿಯನ್ನು ಪೋಷಿಸಿದ. ಅಲೆಕ್ಸಾಂಡ್ರಿಯದ ಗ್ರಂಥಾಲಯವನ್ನು ವಿಸ್ತರಿಸಿದ. ಈತ ತನ್ನ ಪ್ರವಾಸಗಳನ್ನು ಕುರಿತು ಒಂದು ಬೃಹತ್ ಗ್ರಂಥವನ್ನು ಬರೆದ. ಅನೇಕ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದ. ಈತನ ಮರಣಾ ನಂತರ ಟಾಲಮೀ ಸಾಮ್ರಾಜ್ಯ ಒಡೆದು ಹೋಯಿತು. ಈತ ಸಾಯುವ ಮೊದಲು ಉಯಿಲು ಬರೆದು ಸಿರಿನೀಕವನ್ನು ತನ್ನ ಜಾರಜಪುತ್ರ ಏಪಿಯನಿಗೂ ಈಜಿಪ್ಟ್ ಮತ್ತು ಸೈಪ್ರಸ್‍ಗಳನ್ನು ಹೆಂಡತಿ ಕ್ಲೀಯೊಪಾತ್ರಳಿಗೂ (ಕೋಕೆ) ಹಂಚಿದ.

ಇತರ ಟಾಲಮೀಗಳು: 8ನೆಯ ಟಾಲಮೀಯ ಮರಣಾನಂತರ ಟಾಲಮೀ ಸಾಮ್ರಾಜ್ಯ ಏಕತೆಯಿಂದಿರಲಿಲ್ಲ. ಈಜಿಪ್ಟಿನ ಆಳ್ವಿಕೆಗಾಗಿ ಕ್ಲೀಯೊಪಾತ್ರಳಿಗೂ ಅವಳ ಮಕ್ಕಳು ಸೋಟರ್ 11 ಮತ್ತು ಅಲೆಕ್ಸಾಂಡರಿಗೂ ನಡುವೆ ಕಲಹಗಳು ಪ್ರಾರಂಭವಾದವು.

ಈಜಿಪ್ಟಿನಲ್ಲಿ ತಾಯಿಯೊಂದಿಗೆ ಮೊದಲು ಸೋಟರ್ ಆಳ್ವಿಕೆ ಪ್ರಾರಂಭಿಸಿದ. ಆದರೆ 108ರಲ್ಲಿ ತಾಯಿಮಕ್ಕಳಲ್ಲಿ ವೈಮನಸ್ಯ ಬೆಳೆದು ಸೋಟರ್ ರಾಜ್ಯ ಬಿಟ್ಟು ಸೈಪ್ರಸ್‍ನಲ್ಲಿ ಆಳತೊಡಗಿದ. ಅನಂತರ ಪಟ್ಟಕ್ಕೆ ಬಂದ. ಟಾಲಮೀ ಅಲೆಕ್ಸಾಂಡರನೊಬ್ಬನೇ ಕ್ರಿ.ಪೂ. 89ರವರೆಗೆ ಈಜಿಪ್ಟನ್ನು ಆಳಿದ. ಕ್ರಿ.ಪೂ. 89ರಲ್ಲಿ ಜನರು ದಂಗೆಯೆದ್ದು ಅವನನ್ನು ಓಡಿಸಿದರು. ಸೋಟರ್ ಕ್ರಿ.ಪೂ.88ರಲ್ಲಿ ಹಿಂದಕ್ಕೆ ಬಂದು ಈಜಿಪ್ಟ್ ಮತ್ತು ಸೈಪ್ರಸ್‍ಗಳನ್ನು ಒಟ್ಟುಗೂಡಿಸಿ ಆಳಿದ. ಅವನ ಎರಡನೆಯ ಆಳ್ವಿಕೆಯ ಅನಂತರ ಅವನ ಮಗಳು ಬೆರೆನೀಸ್ ಅಧಿಕಾರ ವಹಿಸಿಕೊಂಡಳು. ರೋಮನ್ ಚಕ್ರಾಧಿಪತ್ಯದ ಬೆಂಬಲ ಪಡೆದ 1ನೆಯ ಅಲೆಕ್ಸಾಂಡರನ ಪುತ್ರ 2ನೆಯ ಅಲೆಕ್ಸಾಂಡರ್ ಅಲೆಕ್ಸಾಂಡ್ರಿಯಕ್ಕೆ ಬಂದು ತನ್ನ ಸೋದರ ಸಂಬಂಧಿಯೂ ಮಲತಾಯಿಯೂ ಆದ ಬೆರೆನೀಸಳನ್ನು ಮದುವೆಯಾಗಿ ಹತ್ತನೆಯ ಟಾಲಮೀ ಎಂದು ಪಟ್ಟಕ್ಕೆ ಬಂದ. ಪಟ್ಟಕ್ಕೆ ಬಂದ ಕೇವಲ ಇಪ್ಪತ್ತು ದಿನಗಳಲ್ಲಿಯೇ ಹೆಂಡತಿಯನ್ನು ಕೊಂದ. ಇದರಿಂದ ಜನ ಕುಪಿತರಾಗಿ ಇವನನ್ನು ಕೊಂದುಹಾಕಿದರು.

ಅಲೆಕ್ಸಾಂಡ್ರಿಯದ ಜನ ಸೋಟರನ ಜಾರಜ ಪುತ್ರ ಎರಡನೆಯ ಸೋಟರನನ್ನು ರಾಜನಾಗಿ ಆರಿಸಿಕೊಂಡರು. ಈತ 11ನೆಯ ಟಾಲಮಿಯೆಂದು ಪಟ್ಟವೇರಿದ. ಈತನ ಹಕ್ಕು ಸ್ಥಿರವಾಗಿರಲಿಲ್ಲ. ಇವನ ಅನಂತರ 12ನೆಯ ಟಾಲಮೀ ಫಿಲಾಪಟಾರ್ (51-47) ಮತ್ತು ಕ್ಲೀಯೊಪಾತ್ರ ಫಿಲಾಪಟಾರರ ಕಾಲದಲ್ಲಿ ಈಜಿಪ್ಟಿನ ಇತಿಹಾಸ ರೋಮನ್ ಚಕ್ರಾಧಿಪತ್ಯದ ಇತಿಹಾಸದೊಡನೆ ಸೇರಿಹೋಗುತ್ತದೆ. ಕ್ರಿ.ಪೂ. 44ರವರೆಗೆ 13ನೆಯ ಟಾಲಮೀ ಮತ್ತು 30ರವರೆಗೆ 14ನೆಯ ಟಾಲಮೀ ಆಳಿದರೆಂದು ತಿಳಿದುಬರುತ್ತದೆ.												(ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ